ನಿಮ್ಮ ಪತ್ನಿಯರಿಗೆ ಮಕ್ಕಳಿಲ್ಲದಿದ್ದರೆ, ಅವರು ಬಿಟ್ಟುಹೋದ ಆಸ್ತಿಯಲ್ಲಿ ಅರ್ಧ ಭಾಗವು ನಿಮಗೆ ದೊರೆಯುತ್ತದೆ. ಅವರಿಗೆ ಮಕ್ಕಳಿದ್ದರೆ ಅವರು ಬಿಟ್ಟು ಹೋದ ಆಸ್ತಿಯಲ್ಲಿ ನಾಲ್ಕನೇ ಒಂದು ಭಾಗವು ನಿಮಗೆ ದೊರೆಯುತ್ತದೆ. ಇದು ಅವರು ಮಾಡುವ ಉಯಿಲು ಮತ್ತು ಸಾಲವನ್ನು ತೀರಿಸಿದ ನಂತರ. ನಿಮಗೆ ಮಕ್ಕಳಿಲ್ಲದಿದ್ದರೆ, ನೀವು ಬಿಟ್ಟುಹೋದ ಆಸ್ತಿಯಲ್ಲಿ ನಾಲ್ಕನೇ ಒಂದು ಭಾಗವು ಅವರಿಗೆ (ಪತ್ನಿಯರಿಗೆ) ದೊರೆಯುತ್ತದೆ. ನಿಮಗೆ ಮಕ್ಕಳಿದ್ದರೆ, ನೀವು ಬಿಟ್ಟುಹೋದ ಆಸ್ತಿಯಲ್ಲಿ ಎಂಟನೇ ಒಂದು ಭಾಗವು ಅವರಿಗೆ ದೊರೆಯುತ್ತದೆ. ಇದು ನೀವು ಮಾಡುವ ಉಯಿಲು ಮತ್ತು ಸಾಲವನ್ನು ತೀರಿಸಿದ ನಂತರ. ವಾರಸು ಆಸ್ತಿಯನ್ನು ಬಿಟ್ಟು ಹೋಗುವ ಪುರುಷ ಅಥವಾ ಮಹಿಳೆಗೆ ತಂದೆ-ತಾಯಿ ಹಾಗೂ ಮಕ್ಕಳಿಲ್ಲದೆ, ಕೇವಲ ಸಹೋದರ ಅಥವಾ ಸಹೋದರಿಯಿದ್ದರೆ, ಆ ಇಬ್ಬರಲ್ಲಿ ಪ್ರತಿಯೊಬ್ಬರಿಗೂ ಆರನೇ ಒಂದು ಭಾಗವು ದೊರೆಯುತ್ತದೆ. ಅವರು ಇಬ್ಬರಿಗಿಂತ ಹೆಚ್ಚಿದ್ದರೆ, ಅವರು ಮೂರನೇ ಒಂದು ಭಾಗದಲ್ಲಿ ಸಮಾನ ಪಾಲುದಾರರಾಗುತ್ತಾರೆ. ಇದು ಹಾನಿಕರವಲ್ಲದ ಉಯಿಲು1 ಮತ್ತು ಸಾಲವನ್ನು ತೀರಿಸಿದ ನಂತರ. ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.