(ಸಂದೇಶವಾಹಕರೇ,) ತಾವು ಸರಿಸುಮಾರು ರಾತ್ರೆಯ ಮೂರರಲ್ಲಿ ಎರಡು ಭಾಗ (ಇನ್ನು ಕೆಲವೊಮ್ಮೆ) ಅರ್ಧಭಾಗ ಮತ್ತು (ಕೆಲವೊಮ್ಮೆ) ಮೂರನೆಯ ಒಂದುಭಾಗ ನಮಾಝ್ ಮಾಡು ತ್ತೀರೆಂದು ತಮ್ಮ ಪ್ರಭು ಖಂಡಿತ ತಿಳಿದಿರುತ್ತಾನೆ. ತಮ್ಮ ಸಂಗಡ ಒಂದು ಕೂಟದವರೂ. (ಹಾಗೇ ಮಾಡುತ್ತಿದ್ದಾರೆ) ರಾತ್ರಿ ಮತ್ತು ಹಗಲನ್ನು ಅಲ್ಲಾಹನು ಲೆಕ್ಕವಿಡುವನು. ನಿಮಗೆ ಕಾಲಗಣನೆ ಯನ್ನು ಸರಿಯಾಗಿ ಮಾಡಲಾಗದೆಂದು ಅವನಿಗೆ ತಿಳಿದಿದೆ. ಆದುದರಿಂದ ಅವನು ನಿಮ್ಮ ಮೇಲೆ ವಿನಾಯಿತಿ ತೋರಿದನು. ಹೀಗಾಗಿ ನೀವು ಖುರ್‍ಆನ್‍ನಿಂದ, ಸೌಕರ್ಯವಾದುದನ್ನು ಪಠಿಸಿ (ನಮಾಝ್ ಮಾಡಿ)ಕೊಳ್ಳಿರಿ. ನಿಮ್ಮ ಪೈಕಿ ರೋಗಿಗಳಿರಬಹುದೆಂದೂ, ಇನ್ನು ಕೆಲವರು ಅಲ್ಲಾಹನ ಅನುಗ್ರಹವನ್ನರಸಿ ಕೊಂಡು ಭೂಮಿಯಲ್ಲಿ ಸಂಚರಿಸಲಿರುವರೆಂದೂ ಮತ್ತೆ ಕೆಲವರು ಅಲ್ಲಾಹನ ಮಾರ್ಗದಲ್ಲಿ ಯುದ್ಧಕ್ಕೆ ಹೋಗಲಿರುವರೆಂದೂ ಅವನಿಗೆ (ಅಲ್ಲಾಹನಿಗೆ ) ತಿಳಿದಿದೆ. ಆದುದರಿಂದ ನೀವು ಖುರ್‍ಆನ್‍ನಿಂದ ಸೌಕರ್ಯವಾದುದನ್ನು ಪಠಿಸಿರಿ, ನಮಾಝ್ ಕ್ರಮಪ್ರಕಾರ ನಿರ್ವಹಿಸಿರಿ. ಝಕಾತನ್ನು ಪಾವತಿಸಿರಿ ಮತ್ತು ಅಲ್ಲಾಹನಿಗೆ ಉತ್ತಮ ಸಾಲವನ್ನು ಕೊಡಿರಿ. ನೀವು ಸ್ವಂತಕ್ಕಾಗಿ ಯಾವುದೇ ಸತ್ಕರ್ಮವನ್ನು ಮುಂದಾಗಿ ನಿರ್ವಹಿಸುತ್ತೀರೆಂದಾದರೆ, ಅಲ್ಲಾಹನ ಬಳಿ ಅದು ಅತ್ಯಧಿಕ ಗುಣಕರವಾಗಿಯೂ, ಮಹತ್ತರ ಪ್ರತಿಫಲವುಳ್ಳದ್ದಾಗಿಯೂ ನೀವು ಕಾಣುವಿರಿ. ನೀವು ಅಲ್ಲಾಹನೊಡನೆ ಪಾಪ ಮುಕ್ತಿಗೆ ಬೇಡಿರಿ. ಖಂಡಿತವಾಗಿಯೂ ಅಲ್ಲಾಹನು ಮಹಾಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ.